Steps to Peace with God

ದೇವರು, ಜೀವನ ಮತ್ತು ನಿಮ್ಮ ಉದ್ದೇಶ
ದೇವರು ನಿಮ್ಮನ್ನು ಪ್ರೀತಿಸುತ್ತಾನೆ. ನಿಮ್ಮ ಗತಕಾಲದ ನೋವುಗಳಿಂದ ಮತ್ತು ಕಠಿಣ ಪರಿಸ್ಥಿತಿಗಳಿಂದ ನೀವು ಬಿಡುಗಡೆ ಹೊಂದಿ, ಆತನ ಕ್ಷಮಾಪಣೆಯನ್ನು ಮತ್ತು ಗುಣಮುಖತೆಯನ್ನು ಅನುಭವಿಸಬೇಕೆಂದು ಆತನು ಬಯಸುತ್ತಾನೆ. ದೇವರು ನಿಮ್ಮನ್ನು ವಿಶೇಷವಾಗಿ ಸೃಷ್ಟಿಸಿದ್ದಾನೆ; ನಿಮ್ಮ ಜೀವನದಲ್ಲಿ ಆತನ ಉದ್ದೇಶವನ್ನು ಪೂರೈಸಲು ನಿಮಗೆ ವಿಶಿಷ್ಟವಾದ ವರಗಳನ್ನು ಮತ್ತು ತಾಲೆಂತುಗಳನ್ನು ನೀಡಿದ್ದಾನೆ. ಆತನ ಸಹಾಯದಿಂದ ನೀವು ಸಂತೋಷ ಮತ್ತು ತೃಪ್ತಿಯಿಂದ ಕೂಡಿದ ಜೀವನವನ್ನು ನಡೆಸಲು ಸಾಧ್ಯವಿದೆ.
ದೇವರು ನಿಮ್ಮನ್ನು ಪ್ರೀತಿಸುತ್ತಾನೆ
ದೇವರು ನಿಮ್ಮನ್ನು ಪ್ರೀತಿಸುತ್ತಾನೆ ಮತ್ತು ನೀವು ಆತನನ್ನು ತಿಳಿದುಕೊಳ್ಳಬೇಕೆಂದು ಬಯಸುತ್ತಾನೆ. ಆತನು ನಿಮ್ಮನ್ನು ಸಮಾಧಾನದಿಂದ ತುಂಬಿಸಿ, ನಿಮಗೆ ಸದಾಕಾಲಕ್ಕೂ ಇರುವ ಸತ್ಯವಾದ ಜೀವವನ್ನು ನೀಡುತ್ತಾನೆ.
ಸತ್ಯವೇದವು ಹೀಗೆ ಹೇಳುತ್ತದೆ:
“ಯಾಕಂದರೆ ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನಲ್ಲಿ ನಂಬಿಕೆಯಿಡುವ ಯಾವನೂ ನಾಶವಾಗದೆ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” – ಯೋಹಾನ 3:16
ಯೇಸು ಸ್ವಾಮಿ ಹೀಗೆ ಹೇಳಿದರು:
“…ನಾನಾದರೋ ಅವುಗಳಿಗೆ ಜೀವವಿರಬೇಕೆಂತಲೂ ಅದು ಸಮೃದ್ಧಿಯಾಗಿ ಇರಬೇಕೆಂತಲೂ ಬಂದೆನು.” – ಯೋಹಾನ 10:10
ದೇವರು ನಮಗೆ ಸಮಾಧಾನವನ್ನೂ ಜೀವವನ್ನೂ ನೀಡಲು ಯೋಜಿಸಿರುವಾಗ, ನಾವು ಏಕಕ್ಕೆ ದೇವರಿಂದ ಇಷ್ಟು ದೂರವಿದ್ದೇವೆ?


ನಾವು ದೇವರಿಂದ ಅಗಲಿದ್ದೇವೆ
ಆದಿಕಾಲದಿಂದಲೂ ನಾವು ದೇವರಿಗೆ ಅವಿಧೇಯರಾಗಲು ಮತ್ತು ನಮ್ಮ ಸ್ವಂತ ದಾರಿಯಲ್ಲಿ ನಡೆಯಲು ಆರಿಸಿಕೊಂಡಿದ್ದೇವೆ. ಇಂದಿಗೂ ನಾವು ಅದೇ ತಪ್ಪು ನಿರ್ಧಾರಗಳನ್ನು ಮಾಡುತ್ತಿದ್ದೇವೆ. ಇದರ ಫಲವಾಗಿ ನಾವು ದೇವರಿಂದ ಅಗಲಿದ್ದೇವೆ.
ವಾಕ್ಯವು ಹೀಗೆ ಹೇಳುತ್ತದೆ:
“ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋದರು.” – ರೋಮಾಪುರದವರಿಗೆ 3:23
ಪಾಪವೆಂದರೆ ದೇವರ ಯೋಜನೆಗೆ ವಿರುದ್ಧವಾಗಿ ಆಲೋಚಿಸುವುದು, ಮಾತನಾಡುವುದು ಅಥವಾ ಕೆಲಸ ಮಾಡುವುದು.
“ಪಾಪದ ಸಂಬಳ ಮರಣ; ಆದರೆ ದೇವರ ದಾನವು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ಸಿಕ್ಕುವ ನಿತ್ಯಜೀವವೇ.” – ರೋಮಾಪುರದವರಿಗೆ 6:23
ದೇವರನ್ನು ತಲುಪಲು ಒಂದೇ ಒಂದು ಮಾರ್ಗವಿದೆ.
ಯೇಸು ಕ್ರಿಸ್ತನು ನಮ್ಮ ಪಾಪಗಳಿಗೋಸ್ಕರ ಮರಣಹೊಂದಿದನು
ಯೇಸು ಕ್ರಿಸ್ತನು ದೇವರ ಮಗನು. ನಮ್ಮನ್ನು ಪುನಃ ದೇವರ ಬಳಿಗೆ ಸೇರಿಸಬಲ್ಲ ಏಕೈಕ ವ್ಯಕ್ತಿ ಆತನೇ. ಯೇಸು ಶಿಲುಬೆಯ ಮೇಲೆ ಮರಣಹೊಂದಿ, ಸಮಾಧಿಯಿಂದ ಎದ್ದು ಬಂದನು. ಆತನು ನಮ್ಮ ಪಾಪಗಳಿಗಾಗಿ ದಂಡವನ್ನು ತೆತ್ತನು ಮತ್ತು ದೇವರಿಗೂ ಮನುಷ್ಯರಿಗೂ ಮಧ್ಯೆ ಇದ್ದ ಕಂದಕವನ್ನು ಸರಿಪಡಿಸಿ ಸೇತುವೆಯಾದನು.
ವಾಕ್ಯವು ಹೀಗೆ ಹೇಳುತ್ತದೆ:
“ದೇವನು ಒಬ್ಬನೇ, ದೇವರಿಗೂ ಮನುಷ್ಯರಿಗೂ ಮಧ್ಯಸ್ಥನು ಒಬ್ಬನೇ, ಆತನು ಮನುಷ್ಯನಾಗಿ ಬಂದ ಕ್ರಿಸ್ತ ಯೇಸುವೇ.” – 1 ತಿಮೊತಿ 2:5
“ಕ್ರಿಸ್ತನು ಕೂಡ ನಮ್ಮ ಪಾಪಗಳಿಗೋಸ್ಕರ ಒಂದೇ ಸಾರಿ ಶ್ರಮೆಪಟ್ಟನು; ಆ ನೀತಿವಂತನು ಅನೀತಿವಂತರಾದ ನಿಮ್ಮನ್ನು ದೇವರ ಬಳಿಗೆ ಸೇರಿಸುವದಕ್ಕೋಸ್ಕರ ಆತನು ಹೀಗೆ ಮಾಡಿದನು…” – 1 ಪೇತ್ರ 3:18
ದೇವನು ಈ ಏಕೈಕ ಮಾರ್ಗವನ್ನು ಸಿದ್ಧಪಡಿಸಿದ್ದಾನೆ-ಈಗ ನಿರ್ಧಾರ ಮಾಡಬೇಕಾದವರು ನಾವು.


ಸತ್ಯವೇದವು ವಾಗ್ದಾನ ಮಾಡುತ್ತದೆ:
“ಆತನನ್ನು ಎಷ್ಟೋ ಮಂದಿ ಅಂಗೀಕರಿಸಿದರೋ ಅಂದರೆ ಆತನ ನಾಮದಲ್ಲಿ ನಂಬಿಕೆಯಿಟ್ಟವರಿಗೆ ದೇವರ ಮಕ್ಕಳಾಗುವ ಅಧಿಕಾರವನ್ನು ಕೊಟ್ಟನು.” ಯೋಹಾನ 1:12
ನೀವು ಈಗಲೇ ನಿಮ್ಮ ಜೀವನವನ್ನು ಯೇಸು ಕ್ರಿಸ್ತನಿಗೆ ಒಪ್ಪಿಸಿಕೊಡಲು ಬಯಸುತ್ತೀರಾ? ಹಾಗಿದ್ದರೆ, ಈ ಕೆಳಗಿನ ಪ್ರಾರ್ಥನೆಯನ್ನು ಮಾಡುವ ಮೂಲಕ ಯೇಸುವನ್ನು ನಿಮ್ಮ ರಕ್ಷಕನನ್ನಾಗಿ ಸ್ವೀಕರಿಸಬಹುದು:
ಈ ರೀತಿ ಪ್ರಾರ್ಥಿಸಿ:
“ಪ್ರಿಯ ಕರ್ತನಾದ ಯೇಸುವೇ, ನಾನು ಪಾಪಿಯಾಗಿದ್ದೇನೆ ಮತ್ತು ನಿನ್ನ ಕ್ಷಮಾಪಣೆ ನನಗೆ ಅವಶ್ಯಕವೆಂದು ಬಲ್ಲೆನು. ನೀನು ನನಗೋಸ್ಕರ ಶಿಲುಬೆಯ ಮೇಲೆ ಮರಣಹೊಂದಿ, ನನಗೆ ಜೀವವನ್ನು ನೀಡಲು ಸಮಾಧಿಯಿಂದ ಎದ್ದು ಬಂದಿ ಎಂದು ನಾನು ನಂಬುತ್ತೇನೆ. ದೇವರಿಗೆ ಇರುವ ಏಕೈಕ ಮಾರ್ಗ ನೀನೇ ಎಂದು ನನಗೆ ತಿಳಿದಿದೆ. ಆದ್ದರಿಂದ ಈಗ ನಾನು ನಿನಗೆ ಅವಿಧೇಯನಾಗಿ ಬದುಕುವುದನ್ನು ಬಿಟ್ಟು, ನಿನಗಾಗಿ ಬದುಕಲು ಬಯಸುತ್ತೇನೆ. ದಯಮಾಡಿ ನನ್ನನ್ನು ಕ್ಷಮಿಸು, ನನ್ನ ಜೀವನವನ್ನು ಬದಲಾಯಿಸು ಮತ್ತು ನಿನ್ನನ್ನು ತಿಳಿದುಕೊಳ್ಳುವುದು ಹೇಗೆಂದು ನನಗೆ ತೋರಿಸಿಕೊಡು. ಯೇಸುವಿನ ನಾಮದಲ್ಲಿ ಬೇಡುತ್ತೇನೆ, ಆಮೆನ್.”
ನೀವು ಈ ಪ್ರಾರ್ಥನೆಯನ್ನು ಮಾಡಿ ಯೇಸುವನ್ನು ನಿಮ್ಮ ಜೀವನಕ್ಕೆ ಆಹ್ವಾನಿಸಿದ್ದೀರಾ? ದಯವಿಟ್ಟು ನಮಗೆ ತಿಳಿಸಿ. ನಾವು ನಿಮಗಾಗಿ ಪ್ರಾರ್ಥಿಸಲು ಮತ್ತು ಹೆಚ್ಚಿನ ಆತ್ಮಿಕ ವಿಷಯಗಳನ್ನು ಹಂಚಿಕೊಳ್ಳಲು ಬಯಸುತ್ತೇವೆ.
