ಪ್ರಾರ್ಥನೆ

ಪ್ರಾರ್ಥನೆಯ ಶಕ್ತಿ ಮತ್ತು ವಿವಿಧ ಪ್ರಕಾರಗಳು
ವಿಶ್ವಾಸಿಗಳು ದೇವರೊಂದಿಗೆ ಸಂಪರ್ಕ ಹೊಂದಲು ಇರುವ ಅತ್ಯಂತ ಶಕ್ತಿಯುತ ಮತ್ತು ವೈಯಕ್ತಿಕ ಮಾರ್ಗಗಳಲ್ಲಿ ಪ್ರಾರ್ಥನೆಯೂ ಒಂದು. ಇದು ಕೇವಲ ಬಾಯಿಯ ಮಾತುಗಳಲ್ಲ—ಇದು ನಮ್ಮ ಪರಲೋಕದ ತಂದೆಯೊಂದಿಗಿನ ಜೀವಂತ ಸಂಬಂಧವಾಗಿದೆ. ಪ್ರಾರ್ಥನೆಯ ಮೂಲಕ ನಾವು ದೇವರನ್ನು ಆರಾಧಿಸುತ್ತೇವೆ, ನಮ್ಮ ಪಾಪಗಳನ್ನು ಅರಿಕೆ ಮಾಡುತ್ತೇವೆ, ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಮತ್ತು ನಮ್ಮ ಹಾಗೂ ಇತರರ ಅಗತ್ಯಗಳನ್ನು ದೇವರ ಮುಂದೆ ಇಡುತ್ತೇವೆ.
ಬೈಬಲ್ ವಿಶ್ವಾಸಿಗಳನ್ನು ಪ್ರತಿದಿನ ಪ್ರಾರ್ಥನೆಯಲ್ಲಿ ತೊಡಗಿರಲು ಪ್ರೋತ್ಸಾಹಿಸುತ್ತದೆ. ಕೊಲೊಸ್ಸೆಯವರಿಗೆ 4:2 ರಲ್ಲಿ, “ಪ್ರಾರ್ಥನೆಯಲ್ಲಿ ಎಚ್ಚರವಾಗಿದ್ದು ಸ್ತೋತ್ರದೊಂದಿಗೆ ಅದರಲ್ಲಿ ನಿರತರಾಗಿರಿ” ಎಂದು ಹೇಳಲಾಗಿದೆ. ಪ್ರಾರ್ಥನೆಯು ನಮ್ಮ ನಂಬಿಕೆಯನ್ನು ಬಲಪಡಿಸುತ್ತದೆ, ನಮ್ಮ ಹೃದಯವನ್ನು ದೇವರ ಇಚ್ಛೆಗೆ ಒಗ್ಗಿಸುತ್ತದೆ ಮತ್ತು ಪ್ರತಿಯೊಂದು ಪರಿಸ್ಥಿತಿಯಲ್ಲೂ ನಾವು ಆತನ ಮೇಲೆ ಅವಲಂಬಿತರಾಗಿದ್ದೇವೆ ಎಂಬುದನ್ನು ನೆನಪಿಸುತ್ತದೆ.
ಕ್ರೈಸ್ತರು ವೈಯಕ್ತಿಕವಾಗಿ ಅಥವಾ ಇತರರೊಂದಿಗೆ ಸೇರಿ ಪ್ರಾರ್ಥಿಸಬಹುದು. ಕೆಲವು ಪ್ರಾರ್ಥನೆಗಳು ಆ ಕ್ಷಣದಲ್ಲಿ ಹೃದಯದಿಂದ ನೇರವಾಗಿ ಬರುತ್ತವೆ, ಇನ್ನು ಕೆಲವು ಪ್ರಾರ್ಥನೆಗಳು ಬರೆದ ರೂಪದಲ್ಲಿರುತ್ತವೆ. ಉದಾಹರಣೆಗೆ, ಯೇಸು ಸ್ವಾಮಿ ಸ್ವತಃ ತನ್ನ ಶಿಷ್ಯರಿಗೆ ಕಲಿಸಿಕೊಟ್ಟ ‘ಪರಲೋಕ ಪ್ರಾರ್ಥನೆ’ (ಮತ್ತಾಯ 6:9-13). ಒಬ್ಬಂಟಿಯಾಗಿ ಮೆಲ್ಲಗೆ ಹೇಳಲಿ ಅಥವಾ ಸಭೆಯ ಆರಾಧನೆಯಲ್ಲಿ ಎಲ್ಲರೊಂದಿಗೆ ಸೇರಿ ಹೇಳಲಿ, ಪ್ರಾರ್ಥನೆಯು ವಿಶ್ವಾಸಿಗಳನ್ನು ದೇವರಿಗೆ ಹತ್ತಿರವಾಗಿಸುತ್ತದೆ ಮತ್ತು ಆತನ ಮಾರ್ಗದರ್ಶನ, ಶಾಂತಿ ಹಾಗೂ ಶಕ್ತಿಯನ್ನು ಅನುಭವಿಸಲು ಸಹಾಯ ಮಾಡುತ್ತದೆ.
ಪ್ರಾರ್ಥನೆ ಏಕೆ ಮುಖ್ಯ?
ಪ್ರಾರ್ಥನೆಯು ದೇವರಿಗೂ ವಿಶ್ವಾಸಿಯೊಬ್ಬನಿಗೂ ಇರುವ ನೇರ ಸಂಪರ್ಕವಾಗಿದೆ. ಪ್ರಾರ್ಥನೆಯ ಮೂಲಕ ನಾವು:
- ದೇವರೊಂದಿಗೆ ಆಳವಾದ ಸಂಬಂಧವನ್ನು ಬೆಳೆಸಿಕೊಳ್ಳುತ್ತೇವೆ.
- ಜೀವನಕ್ಕೆ ಬೇಕಾದ ಜ್ಞಾನ ಮತ್ತು ಮಾರ್ಗದರ್ಶನವನ್ನು ಹುಡುಕುತ್ತೇವೆ.
- ಆತ್ಮಿಕ ಬಲ ಮತ್ತು ಆದರಣೆಯನ್ನು ಪಡೆಯುತ್ತೇವೆ.
- ದೇವರ ಸಹಾಯ ಬೇಕಾದ ಇತರರಿಗಾಗಿ ವಿಜ್ಞಾಪನೆ ಮಾಡುತ್ತೇವೆ.
- ದೇವರು ನೀಡಿದ ಆಶೀರ್ವಾದಗಳಿಗಾಗಿ ಕೃತಜ್ಞತೆ ಸಲ್ಲಿಸುತ್ತೇವೆ.
ಪ್ರಾರ್ಥನೆಯು ದೈನಂದಿನ ಜೀವನದ ಭಾಗವಾಗಿರಬೇಕು ಎಂದು ಹೊಸ ಒಡಂಬಡಿಕೆಯು ಸತತವಾಗಿ ಕಲಿಸುತ್ತದೆ. ಆರಂಭದ ಕಾಲದ ಕ್ರೈಸ್ತರು ದೇವರು ತಮ್ಮ ಮಾತನ್ನು ಕೇಳುತ್ತಾನೆ ಮತ್ತು ಅದಕ್ಕೆ ಉತ್ತರ ನೀಡುತ್ತಾನೆ ಎಂದು ನಂಬಿ, ವೈಯಕ್ತಿಕವಾಗಿಯೂ ಮತ್ತು ಕೂಟಗಳಲ್ಲೂ ನಿಯಮಿತವಾಗಿ ಪ್ರಾರ್ಥಿಸುತ್ತಿದ್ದರು.

ಕ್ರೈಸ್ತ ಪ್ರಾರ್ಥನೆಯ ಪ್ರಮುಖ ವಿಧಗಳು
ಬೈಬಲ್ ಮತ್ತು ಕ್ರೈಸ್ತ ಸಂಪ್ರದಾಯವು ಪ್ರಾರ್ಥನೆಯ ಕೆಲವು ಪ್ರಮುಖ ವಿಧಾನಗಳನ್ನು ವಿವರಿಸುತ್ತದೆ. ಪ್ರತಿಯೊಂದು ವಿಧವೂ ದೇವರೊಂದಿಗಿನ ನಮ್ಮ ಸಂಬಂಧದ ಬೇರೆ ಬೇರೆ ಮುಖಗಳನ್ನು ತೋರಿಸುತ್ತದೆ.
1. ಆರಾಧನೆ (ಸ್ತೋತ್ರ ಬಲಿ): ದೇವರು ಎಂಥವನು—ಆತನು ಪವಿತ್ರನು, ಪ್ರೀತಿಯುಳ್ಳವನು ಮತ್ತು ಶಕ್ತಿಯುಳ್ಳವನು ಎಂದು ಕೊಂಡಾಡುವುದೇ ಆರಾಧನೆ. ಇಲ್ಲಿ ನಾವು ಏನನ್ನೂ ಕೇಳದೆ ಕೇವಲ ದೇವರನ್ನು ಮಹಿಮೆಪಡಿಸುತ್ತೇವೆ.
2. ಅರಿಕೆ (ಪಶ್ಚಾತ್ತಾಪ): ಅರಿಕೆ ಎಂದರೆ ವಿಶ್ವಾಸಿಗಳು ತಮ್ಮ ಪಾಪಗಳನ್ನು ದೇವರ ಮುಂದೆ ಒಪ್ಪಿಕೊಂಡು ಕ್ಷಮೆ ಕೇಳುವುದು. ಪಶ್ಚಾತ್ತಾಪದ ಮೂಲಕ ನಾವು ದೇವರ ಕರುಣೆ ಮತ್ತು ಹೊಸ ಚೈತನ್ಯವನ್ನು ಅನುಭವಿಸುತ್ತೇವೆ.
3. ಕೃತಜ್ಞತೆ: ದೇವರು ನೀಡಿದ ಆಶೀರ್ವಾದಗಳು, ನಮ್ಮ ಅಗತ್ಯಗಳನ್ನು ಪೂರೈಸಿದ್ದಕ್ಕಾಗಿ ಮತ್ತು ಆತನ ನಂಬಿಗಸ್ತಿಕೆಗಾಗಿ ಸಲ್ಲಿಸುವ ಧನ್ಯವಾದವೇ ಈ ಪ್ರಾರ್ಥನೆ. ಪ್ರತಿಯೊಂದು ಒಳ್ಳೆಯ ಸಂಗತಿಯೂ ದೇವರಿಂದಲೇ ಬರುತ್ತದೆ ಎಂದು ಇದು ನಮಗೆ ನೆನಪಿಸುತ್ತದೆ.
4. ಬಿನ್ನಹ (ವಿಜ್ಞಾಪನೆ): ನಮ್ಮ ವೈಯಕ್ತಿಕ ಅಗತ್ಯಗಳನ್ನು—ಅಂದರೆ ಮಾರ್ಗದರ್ಶನ, ಸಹಾಯ ಅಥವಾ ರಕ್ಷಣೆಗಾಗಿ ದೇವರಲ್ಲಿ ಕೇಳಿಕೊಳ್ಳುವುದೇ ವಿಜ್ಞಾಪನೆ.
5. ಮಧ್ಯಸ್ಥಿಕೆ: ಇತರರ ಪರವಾಗಿ ಪ್ರಾರ್ಥಿಸುವುದೇ ಮಧ್ಯಸ್ಥಿಕೆ. ಕ್ರೈಸ್ತರು ತಮ್ಮ ಕುಟುಂಬ, ಸ್ನೇಹಿತರು, ಸಭೆಗಳು, ದೇಶದ ನಾಯಕರು ಮತ್ತು ಕಷ್ಟದಲ್ಲಿರುವ ಜನರಿಗಾಗಿ ಪ್ರಾರ್ಥಿಸುತ್ತಾರೆ.
6. ಸಮರ್ಪಣೆ: ನಮ್ಮ ಜೀವನವನ್ನು ಮತ್ತು ನಮ್ಮ ನಿರ್ಧಾರಗಳನ್ನು ದೇವರ ಇಚ್ಛೆಗೆ ಒಪ್ಪಿಸಿಕೊಡುವುದೇ ಸಮರ್ಪಣೆ. ಈ ಪ್ರಾರ್ಥನೆಯಲ್ಲಿ ನಾವು ನಮ್ಮ ಸ್ವಂತ ಯೋಜನೆಗಳನ್ನು ಬಿಟ್ಟು ದೇವರ ಉದ್ದೇಶವನ್ನು ಹುಡುಕುತ್ತೇವೆ.
7. ಧ್ಯಾನಪೂರ್ವಕ ಪ್ರಾರ್ಥನೆ: ಇದು ಅತ್ಯಂತ ಶಾಂತವಾದ ಪ್ರಾರ್ಥನೆ. ದೇವರ ಸನ್ನಿಧಿಯಲ್ಲಿ ಸುಮ್ಮನೆ ಕುಳಿತು, ಆತನ ವಾಕ್ಯಗಳನ್ನು ಮನಸ್ಸಿನಲ್ಲಿ ನೆನೆಯುತ್ತಾ ಆತನ ಧ್ವನಿಗೆ ಕಿವಿಗೊಡುವುದೇ ಇದರ ಉದ್ದೇಶ.

ಪ್ರಾರ್ಥನೆ ಮಾಡುವ ಮಾದರಿಗಳು
ಕ್ರೈಸ್ತರು ಪ್ರಾರ್ಥನೆ ಮಾಡಲು ಕೆಲವು ಕ್ರಮಗಳನ್ನು ಬಳಸುತ್ತಾರೆ:
ACTS ಮಾದರಿ (ಎ.ಸಿ.ಟಿ.ಎಸ್): ಇದು ಬೈಬಲ್ ಆಧಾರಿತ ಸುಲಭವಾದ ಕ್ರಮ:
- A (Adoration) – ಆರಾಧನೆ: ದೇವರನ್ನು ಕೊಂಡಾಡುವುದು.
- C (Confession) – ಅರಿಕೆ: ಪಾಪಗಳನ್ನು ಒಪ್ಪಿಕೊಳ್ಳುವುದು.
- T (Thanksgiving) – ಕೃತಜ್ಞತೆ: ಧನ್ಯವಾದ ಸಲ್ಲಿಸುವುದು.
- S (Supplication) – ವಿಜ್ಞಾಪನೆ: ಅಗತ್ಯಗಳನ್ನು ಕೇಳುವುದು.
ಸಂಘಟಿತ ಪ್ರಾರ್ಥನೆ (Corporate Prayer): ಸಭೆಯ ಆರಾಧನೆ ಅಥವಾ ಪ್ರಾರ್ಥನಾ ಕೂಟಗಳಲ್ಲಿ ಎಲ್ಲರೂ ಸೇರಿ ಮಾಡುವ ಪ್ರಾರ್ಥನೆ.
ವೈಯಕ್ತಿಕ ಪ್ರಾರ್ಥನೆ: ಒಬ್ಬರೇ ಒಂದು ಶಾಂತ ಜಾಗದಲ್ಲಿ ಕುಳಿತು ದೇವರ ಜೊತೆ ಮಾತನಾಡುವುದು.
ವಾಕ್ಯಾಧಾರಿತ ಪ್ರಾರ್ಥನೆ: ಬೈಬಲ್ ವಚನಗಳನ್ನು, ವಿಶೇಷವಾಗಿ ಕೀರ್ತನೆಗಳನ್ನು ಬಳಸಿಕೊಂಡು ಪ್ರಾರ್ಥಿಸುವುದು.
ಪ್ರಾರ್ಥನೆಯ ಉದಾಹರಣೆಗಳು
ದೇವರ ಜ್ಞಾನದ ಮೇಲೆ ಭರವಸೆ ಇಡುವುದು (ಜ್ಞಾನೋಕ್ತಿಗಳು 3:5) “ನಿನ್ನ ಸ್ವಂತ ಬುದ್ಧಿಯನ್ನೇ ನಂಬಿಕೊಳ್ಳದೆ ಪೂರ್ಣಹೃದಯದಿಂದ ಕರ್ತನಲ್ಲಿ ಭರವಸವಿಡು.” ಪರಲೋಕದ ತಂದೆಯೇ, ನಾವು ಎಷ್ಟೋ ಬಾರಿ ನಮ್ಮ ಸ್ವಂತ ತಿಳುವಳಿಕೆಯ ಮೇಲೆ ಅವಲಂಬಿತರಾಗುತ್ತೇವೆ. ನಮ್ಮ ಅಹಂಕಾರವು ನಿನ್ನ ಜ್ಞಾನವನ್ನು ನೋಡದಂತೆ ನಮ್ಮನ್ನು ಕುರುಡು ಮಾಡುತ್ತದೆ. ಪೂರ್ಣ ಹೃದಯದಿಂದ ನಿನ್ನನ್ನು ನಂಬಲು ನಮಗೆ ಕಲಿಸು. ಪ್ರತಿಯೊಂದು ಸಂದರ್ಭದಲ್ಲೂ ನಿನ್ನ ಮಾರ್ಗದರ್ಶನವನ್ನು ಕಾಣುವಂತೆ ನಮ್ಮ ಕಣ್ಣುಗಳನ್ನು ತೆರೆ ಮತ್ತು ನೀನು ಸಿದ್ಧಪಡಿಸಿದ ಹಾದಿಯಲ್ಲಿ ನಡೆಯಲು ಸಹಾಯ ಮಾಡು. ಆಮೆನ್.
ಕರುಣೆಗಾಗಿ ಪ್ರಾರ್ಥನೆ (ಲೂಕ 5:19) ಪ್ರೀತಿಯ ಕರ್ತನೇ, ನಮ್ಮನ್ನು ಪಾಪ ಮತ್ತು ಅವಮಾನದಿಂದ ಬಿಡಿಸುವ ಮೂಲಕ ನೀನು ಅತಿದೊಡ್ಡ ಪ್ರೀತಿಯನ್ನು ತೋರಿಸಿದ್ದೀಯ. ಯೇಸುವಿನ ಬಳಿಗೆ ಆ ರೋಗಿಯನ್ನು ಹೊತ್ತು ತಂದ ಗೆಳೆಯರಂತೆ ನಮಗೂ ಕರುಣೆಯುಳ್ಳ ಹೃದಯವನ್ನು ನೀಡು. ನಮ್ಮ ಸುತ್ತಮುತ್ತಲಿರುವವರಿಗೆ ನಿನ್ನ ಪ್ರೀತಿಯನ್ನು ತೋರಿಸುವ ಅವಕಾಶಗಳನ್ನು ನಮಗೆ ಒದಗಿಸಿಕೊಡು. ಇತರರನ್ನು ನಿನಗೆ ಹತ್ತಿರ ತರುವ ಧೈರ್ಯ ಮತ್ತು ಕಾಳಜಿ ನಮ್ಮಲ್ಲಿರಲಿ. ಯೇಸುವಿನ ನಾಮದಲ್ಲಿ, ಆಮೆನ್.
ಶಾಂತಿಗಾಗಿ ಪ್ರಾರ್ಥನೆ (ಕೀರ್ತನೆ 130:1) “ಕರ್ತನೇ, ಅಗಾಧವಾದ ಕಷ್ಟದೊಳಗಿಂದ ನಿನಗೆ ಮೊರೆಯಿಡುತ್ತೇನೆ.” ದೇವರಿ ಹಗಲಿರುಳು ಗದ್ದಲ ಮತ್ತು ಗೊಂದಲಗಳಿಂದ ತುಂಬಿರುವ ಈ ಲೋಕದಲ್ಲಿ, ನಿನ್ನ ಸನ್ನಿಧಿಗಾಗಿ ತಾಳ್ಮೆಯಿಂದ ಕಾಯಲು ನಮಗೆ ಸಹಾಯ ಮಾಡು. ನಮ್ಮ ಆತಂಕಗಳನ್ನು ದೂರಮಾಡಿ ನಮ್ಮ ಹೃದಯಗಳಲ್ಲಿ ನಿರೀಕ್ಷೆಯನ್ನು ತುಂಬು. ನಮಗೆ ಹೊಸ ಬಲವನ್ನು ನೀಡಿ ನಿನ್ನ ಪರಿಪೂರ್ಣ ಇಚ್ಛೆಯಂತೆ ನಮ್ಮನ್ನು ನಡೆಸು. ಆಮೆನ್.
ದೇವರ ವಾಗ್ದಾನಗಳಿಗಾಗಿ ಪ್ರಾರ್ಥನೆ (ಯೆಹೋಶುವ 1:13) ಕರ್ತನೇ, ನಿನ್ನ ಜನರಿಗೆ ನೀನು ನೀಡಿದ ವಾಗ್ದಾನಗಳಿಗಾಗಿ ಸ್ತೋತ್ರ. ನಿನ್ನ ಯೋಜನೆಗಳು ನೆರವೇರುವವರೆಗೂ ನಾವು ನಂಬಿಗಸ್ತಿಕೆಯಿಂದ ಕಾಯಲು ಸಹಾಯ ಮಾಡು. ನಮ್ಮ ಹೃದಯಗಳನ್ನು ಸಧೃಢಗೊಳಿಸು ಮತ್ತು ನಿನ್ನ ಆತ್ಮದಲ್ಲಿ ನಮ್ಮನ್ನು ಬೆಳೆಸು. ನಿನ್ನ ವಾಗ್ದಾನಗಳು ನಮ್ಮ ಆತ್ಮಕ್ಕೆ ವಿಶ್ರಾಂತಿಯನ್ನೂ ಜೀವನಕ್ಕೆ ಸಂತೋಷವನ್ನೂ ನೀಡಲಿ. ಆಮೆನ್.
ನಿಮ್ಮ ಪ್ರಾರ್ಥನಾ ವಿನಂತಿಯನ್ನು ಹಂಚಿಕೊಳ್ಳಿ
ನಾವು ಪ್ರಾರ್ಥನೆಯ ಶಕ್ತಿಯನ್ನು ಮತ್ತು ಒಟ್ಟಾಗಿ ನಂಬಿಕೆಯಲ್ಲಿ ನಿಲ್ಲುವ ಪ್ರಾಮುಖ್ಯತೆಯನ್ನು ನಂಬುತ್ತೇವೆ. ನೀವು ಕಷ್ಟದ ಕಾಲದಲ್ಲಿದ್ದರೆ, ಮಾರ್ಗದರ್ಶನವನ್ನು ಹುಡುಕುತ್ತಿದ್ದರೆ ಅಥವಾ ಯಾರಾದರೂ ನಿಮ್ಮ ಜೊತೆ ಸೇರಿ ಪ್ರಾರ್ಥಿಸಬೇಕೆಂದು ಬಯಸಿದರೆ, ನಿಮ್ಮ ಪರವಾಗಿ ಪ್ರಾರ್ಥಿಸಲು ನಮಗೆ ಸಂತೋಷವಾಗುತ್ತದೆ.
ದಯವಿಟ್ಟು ಕೆಳಗಿನ ಫಾರ್ಮ್ ಬಳಸಿ ನಿಮ್ಮ ಪ್ರಾರ್ಥನಾ ವಿನಂತಿಯನ್ನು ಕಳುಹಿಸಿ. ನಮ್ಮ ಪ್ರಾರ್ಥನಾ ತಂಡವು ನಿಮ್ಮ ಅಗತ್ಯಗಳನ್ನು ದೇವರ ಮುಂದೆ ಶ್ರದ್ಧೆಯಿಂದ ಇಡುತ್ತದೆ.
“ನೀತಿವಂತನ ಪ್ರಾರ್ಥನೆಯು ಬಹು ಶಕ್ತಿಯುಳ್ಳದ್ದೂ ಕಾರ್ಯಸಾಧಕವೂ ಆಗಿದೆ.” – ಯಾಕೋಬ 5:16
